ರೆಪ್ಪೆ ಸುರೂಪಿಕೆ - ಬ್ಲೆಫರೊಪ್ಲಾಸ್ಟಿ

	ನಮ್ಮ ಕಣ್ಣುಗಳು ನಮ್ಮ ಮುಖ ತೋರಿಸುವ ಪ್ರತಿಕ್ರಿಯೆಯಲ್ಲಿ ಬಹು ಮುಖ್ಯ ಪಾತ್ರವನ್ನಾಡುತ್ತದೆ. ಕಣ್ಣ ರೆಪ್ಪೆಗಳು ದೇಹದಲ್ಲಿಯೇ ತುಂಬ ತೆಳುವಾದ ಚರ್ಮವನ್ನು ಹೊಂದಿದೆ. ಅದರಲ್ಲಿನ ಸ್ಥಿತಿಸ್ಥಾಪಕಶಕ್ತಿಯ ಎಲಾಸ್ಟಿನ್ ತುಂಬ ಕಡಿಮೆ. ನಿಮಿಷಕ್ಕೆ 6ರಿಂದ 12 ಬಾರಿ ಬಡಿಯುವ ರೆಪ್ಪೆಗಳು ಸದಾ ಕಾರ್ಯನಿರತ. ಅದರ ಮೇಲೆ ಕಣ್ಣೊರೆಸುವುದು, ಸೂರ್ಯನ ಪ್ರಭಾವ, ರಾತ್ರಿ ನಿದ್ದೆಗೆಡುವುದು, ಧೂಮಪಾನ, ಮದ್ಯಪಾನ ಮತ್ತು ಧೂಳು ತಮ್ಮ ಪ್ರಭಾವವನ್ನು ಬೀರುತ್ತವೆ. ವಯಸ್ಸಾದಂತೆ ಕಣ್ಣುಗಳಿಗೆ ಆಧಾರ ನೀಡುವ ರಚನೆಗಳು ದುರ್ಬಲಗೊಳ್ಳುತ್ತದೆ. ಅದರಿಂದಾಗಿ ರೆಪ್ಪೆಗಳು ಇಳಿಬಿದ್ದು ಮಡಿಕೆಗಳನ್ನು ಹೊಂದುತ್ತದೆ. ಕಣ್ಣಿನ ಕೆಳಗೆ ರೆಪ್ಪೆ ಇಳಿಬಿದ್ದು ಚೀಲದಂತಾಗುತ್ತದೆ. ಯೌವನದ ಅಗಲ ಕಣ್ಣುಗಳು ಸುಸ್ತಾದ ಚಿತ್ರವನ್ನು ನೀಡುತ್ತದೆ.

	ಚೀಲದ ಮಡಿಕೆಯಂತಿರುವ ರೆಪ್ಪೆಗಳಿಗೆ ಕಾರಣ ಹುಕ್ಕು ಅದರ ಚಿಕಿತ್ಸೆ ಕೈಕೊಳ್ಳಬೇಕು. ಎಲ್ಲ ಬಗೆಯ ಚಿಕಿತ್ಸೆಗೆ ಮಣಿಯದೆ ಉಳಿದರೆ, ರೆಪ್ಪೆ ಸುರೂಪಿಕೆಯನ್ನು ಕೈಗೊಳ್ಳಬೇಕು. ಅಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ಚರ್ಮದ ಮಡಿಕೆಗಳನ್ನು ಮತ್ತು ಕೊಬ್ವಿನ ಸಂಗ್ರಹವನ್ನು ತೆಗೆದುಹಾಕಿ, ಸಡಿಲಗೊಂಡ ಸ್ನಾಯುಗಳ ಭಾಗವನ್ನು ಕತ್ತರಿಸಿ ಬಿಗಿಮಾಡಬೇಕು. ಇದರ ಫಲವಾಗಿ ಕಣ್ಣುಗಳಲ್ಲಿ ಯೌವನದ ಹೊಳಪು ಪುನಃ ಗೋಚರಿಸುವುದು. ಈ ಬಗೆಯ ಸುರೂಪಿಕ ಚಿಕಿತ್ಸೆಯನ್ನು ವೃದ್ಧಾಪ್ಯದ ಮೊದಲೇ ಕೈಕೊಳ್ಳುವುದು ಉತ್ತಮ. 

ಆದರೂ ಈ ಚಿಕಿತ್ಸೆ ಕಣ್ಣ ಸುತ್ತ ಇರುವ ಸುಕ್ಕುಗಳನ್ನು ಸಂಪೂರ್ಣವಾಗಿ ಹೋಗಲಾಡಿಸದು. ಅಲ್ಲದೆ ಕಣ್ಣ ಸುತ್ತ ಇರುವ ಕಪ್ಪು ವೃತ್ತಗಳನ್ನು ಕಳೆಯದು. ಅಲ್ಲದೆ ಅದು ಕೆನ್ನೆ ಮೇಲೆ ಕಣ್ಣ ಕೆಳಗಿರುವ ಚೀಲಗಳನ್ನು ಕಳೆಯದು. ಇಲ್ಲಿ ಕೈಕೊಳ್ಳುವ ಶಸ್ತ್ರಚಿಕಿತ್ಸೆ ಕಣ್ಣು ಎತ್ತುವುದೆಂದರೂ ಅಲ್ಲಿ ಎತ್ತುವುದೇನೂ ಇಲ್ಲ. ಕೇವಲ ಅಲ್ಲಿನ ಊತಕವನ್ನು ತೆಗೆದುಹಾಕುವುದು. ಅಲ್ಲಿ ಸಂಗ್ರಹಗೊಂಡ ಕೊಬ್ಬು, ಸುಕ್ಕುಗಟ್ಟುವ ಚರ್ಮವನ್ನು ಕತ್ತರಿಸಿ ಟ್ರಿಂ ಮಾಡಲಾಗುತ್ತದೆ. ಅಲ್ಲಿನ ಪ್ರದೇಶವೆಲ್ಲವನ್ನು ಸಾಪು (ಸ್ಮೂತ್) ಮಾಡಲಾಗುತ್ತದೆ. ಈ ಶಸ್ತ್ರಕ್ರಿಯೆ ತುಂಬ ನಾಜೂಕಾದುದು. ಕೆಲವೊಮ್ಮೆ ಲೇಸರ್ ನಿಂದ ಅಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸಬಹುದು. ರೆಪ್ಪೆ ಸುರೂಪಿಕೆಯನ್ನು  ಕೂಕುಪರೆಯ ಮೂಲಕವೂ ಕೈಕೊಳ್ಳಬಹುದು. 				
(ಡಾ. ಅರವಿಂದ ದೇಸಾಯಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ